ಸ್ವಾತಂತ್ರ್ಯ ಎಂದರೆ "ಬೇರೆ ಯಾರ ನಿಯಂತ್ರಣವಿಲ್ಲದ" ಎಂದು ಅರ್ಥ. ಹೀಗಾಗಿ, ಸ್ವಾತಂತ್ರ್ಯ ಎಂದರೆ ಬೇರೆ ಯಾರ ಹಿತಾಸಕ್ತಿಯ ಗುರಿಯಾಗದೇ, ತನ್ನ ಜೀವನವನ್ನು ತಾನೇ ನಿಯಂತ್ರಿಸುವ ಸಾಮರ್ಥ್ಯ.ಅವಲಂಬನೆ ಮತ್ತು ಸ್ವಾತಂತ್ರ್ಯ ಎರಡೂ ಪರಸ್ಪರ ವಿರೋಧಿಗಳು. ಅವಲಂಬನೆ ಎಂದರೆ ಇನ್ನೊಬ್ಬರ ಮೇಲೆ ನಂಬಿಕೊಂಡು, ಅವನ ನಿಯಮಗಳಿಗೆ ಬದ್ಧವಾಗಿ ಬದುಕುವುದು. ಬ್ರಿಟಿಷರ ಆಳ್ವಿಕೆಯಲ್ಲಿ ನಾವು ಬದುಕಿದ್ದಾಗ, ನಮ್ಮ ನೆಲ, ಸಂಪತ್ತು, ಸಂಪನ್ಮೂಲಗಳು, ಎಲ್ಲವೂ ಅವರ ನಿಯಂತ್ರಣದಲ್ಲಿತ್ತು. ಆ ಕಾಲದಲ್ಲಿ ಭಾರತೀಯರು ತಮ್ಮದೇ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಅದೇ ದಾಸ್ಯ, ಅವಲಂಬನೆ. ‘ಹಾಲು ಕೊಳ್ಳಲು ಬಂದವರು ಎಮ್ಮೆಯನ್ನೇ ಹೊಡೆದು ಕೊಂಡು ಹೋದಂತೆ’ ಬ್ರಿಟಿಷರು ಸುಮಾರು ಇನ್ನೂರು ವರ್ಷಗಳ ಕಾಲ ನಮ್ಮನ್ನು ದಾಸ್ಯದ ಸೆರೆಮನೆಗೆ ತಳ್ಳಿ, ಸ್ವಾಭಿಮಾನ, ಮಾನವ ಹಕ್ಕುಗಳು ಮತ್ತು ಸಂಪನ್ಮೂಲಗಳನ್ನೆಲ್ಲ ಕಸಿದುಕೊಂಡರು.
ಭಾರತೀಯ ಇತಿಹಾಸದಲ್ಲಿ ಸ್ವಾತಂತ್ರ್ಯ ಚಳವಳಿ ಒಂದು ವಿಶಿಷ್ಟ ಅಧ್ಯಾಯ. 1857ರ ಮೊದಲ ಸ್ವಾತಂತ್ರ್ಯ ಸಮರದಿಂದ ಹಿಡಿದು 1947ರ ಆಗಸ್ಟ್ 15ರವರೆಗೆ ನಮ್ಮ ಜನಾಂಗ ಅನೇಕ ಬಲಿದಾನಗಳನ್ನು ನೀಡಿತು. ಸಾವಿರಾರು ಕ್ರಾಂತಿಕಾರರು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದರು.ಸ್ವಾತಂತ್ರ್ಯ ಸಿಕ್ಕ ನಂತರ ಭಾರತವು ಅನೇಕ ಮಹತ್ವದ ಬದಲಾವಣೆಗಳನ್ನು ಕಂಡಿತು:
ಮಾನವ ಹಕ್ಕುಗಳು ಸ್ಥಾಪಿಸಲ್ಪಟ್ಟವು – ಪ್ರತಿಯೊಬ್ಬರಿಗೂ ಬದುಕಲು, ಮಾತನಾಡಲು, ಬರೆಯಲು, ಶಿಕ್ಷಣ ಪಡೆಯಲು ಹಕ್ಕು ದೊರಕಿತು;ಗುಲಾಮಗಿರಿಯ ಅಂತ್ಯ ಕಂಡುಬಂತು;
ಸಂವಿಧಾನ ರೂಪಿಸಲ್ಪಟ್ಟಿತು ; ಪ್ರಜಾಪ್ರಭುತ್ವ ಪ್ರಾರಂಭವಾಯಿತು ; ಜನರೇ ಆಡಳಿತಗಾರರನ್ನು ಆಯ್ಕೆಮಾಡುವ ವ್ಯವಸ್ಥೆ ಪ್ರಾರಂಭವಾಯಿತು ;ವಿಶೇಷ ಸೌಲಭ್ಯಗಳು ಹಿಂದುಳಿದ ವರ್ಗಗಳಿಗೆ ಲಭ್ಯವಾಯಿತು; -ಈ ಬದಲಾವಣೆಗಳು ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಸಮಾಜದಲ್ಲಿ ಬೇರೂರಿಸಿದವು. ಇವೆಲ್ಲವೂ ನಮ್ಮ ಜೀವನಕ್ಕೆ ಶಿಸ್ತಿನ , ಕಾನೂನಿನ ಸ್ವರೂಪಗಳ ಜೊತೆಗೆ ಭದ್ರತೆಯ ಚೌಕಟ್ಟನ್ನು ಹಾಕುವುದರೊಂದಿಗೆ ನಮ್ಮೆಲ್ಲರ ಹಕ್ಕುಗಳನ್ನು ಕಾಯ್ದುಕೊಳ್ಳಲು ನಾಂದಿ ಹಾಡಿತು.
ನನ್ನ ದೃಷ್ಟಿಕೋನದಲ್ಲಿ ಸ್ವಾತಂತ್ರ್ಯವೆಂದರೇನು?
ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ, ಅದು ವೈಯಕ್ತಿಕ, ಸಾಮಾಜಿಕ ಮತ್ತು ಮಾನಸಿಕ ಸ್ವಾತಂತ್ರ್ಯ.
ಹಕ್ಕುಗಳ ರಕ್ಷಣೆ: ಸ್ವಾತಂತ್ರ್ಯ ಎಂದರೆ ನನ್ನ ಬದುಕು, ನನ್ನ ಹಕ್ಕುಗಳು, ನನ್ನ ಕನಸುಗಳನ್ನು ರಕ್ಷಿಸುವ ಸಾಮರ್ಥ್ಯ - ಅದು ಗಂಡೇ ಇರಲಿ ! ಹೆಣ್ಣೇ ಇರಲಿ . ನಾನು ನನ್ನ ಮನೆಬಾಗಿಲು ಮುಚ್ಚದೆ ಹೋದರೂ, ಕಳ್ಳತನದ ಭಯವಿಲ್ಲದೆ ಬಾಳಲು ಸಾಧ್ಯವಾದರೆ, ಅದು ನಿಜವಾದ ಸ್ವಾತಂತ್ರ್ಯ. ನಾನು ಬಯಸಿದ ಕ್ಷೇತ್ರದಲ್ಲಿ ಬೆಳೆವ ಸ್ವಾತಂತ್ರ್ಯ – ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ಕಲೆಯಲ್ಲಿ, ಸಂಶೋಧನೆಯಲ್ಲಿ – ನನಗೆ ನನ್ನ ದಾರಿ ಆರಿಸಿಕೊಳ್ಳುವ ಹಕ್ಕು.
ಸ್ವಾತಂತ್ರ್ಯ ಎಂದರೆ ಅಶಿಸ್ತು ಅಲ್ಲ. ಅದು ಮಿತಿಯಿಲ್ಲದ ಅಧಿಕಾರವಲ್ಲ . ಬದಲಿಗೆ, ನಿಯಮ ಮತ್ತು ನಿಯಂತ್ರಣಗಳು ನಮಗೆ ಶಿಸ್ತಿನ ಬದುಕನ್ನು ಕೊಡುವಂತಿರಬೇಕು.
ಹೊರಗಿನ ಒತ್ತಡ, ದೌರ್ಜನ್ಯ ಇಲ್ಲದೆ ಬದುಕುವುದೇ ನಿಜವಾದ ಸ್ವಾತಂತ್ರ್ಯದ ಅನುಭವ.ಸ್ವಾತಂತ್ರ್ಯ ಎಂದರೆ ಅಹಂಕಾರದಿಂದ ವರ್ತಿಸುವುದಲ್ಲ. ಅದು ಆತ್ಮವಿಕಾಸ, ವೈಯಕ್ತಿಕ ಬೆಳವಣಿಗೆ.
ಸ್ವಾತಂತ್ರ್ಯ ಎಂದರೆ ಭಾರತವನ್ನು "ಆತ್ಮನಿರ್ಭರ" ರಾಷ್ಟ್ರವನ್ನಾಗಿಸುವ ಶಕ್ತಿ.
ದೇಶದ ಪ್ರತಿಯೊಂದು ತಾಣವನ್ನು ಮಾಲಿನ್ಯರಹಿತ ವಾತಾವರಣದಲ್ಲಿ, ಭಯವಿಲ್ಲದೆ ಸಂಚರಿಸುವ ಹಕ್ಕು; ಭ್ರಷ್ಟಾಚಾರವಿಲ್ಲದೆ, ಸ್ನೇಹಪರ ಜನರ ಜೊತೆ ಪರಸ್ಪರ ಗೌರವದಿಂದ ಬದುಕುವ ಸ್ಥಿತಿ.ಜಾತಿ, ಧರ್ಮ, ಭಾಷೆ ಎಲ್ಲದರ ಎಲ್ಲೆ ಇಲ್ಲದೆ ಸಮಾನತೆಯಿಂದ ಬದುಕುವ ವ್ಯವಸ್ಥೆ ; ಶ್ರೀ ಕುವೆಂಪುರವರು ಕನಸು ಕಂಡ “ವಿಶ್ವಮಾನವ” ಮತ್ತು ನಾವು ನಂಬಿರುವ "ವಸುದೈವ ಕುಟುಂಬಕo " ತತ್ವವನ್ನು ಸಾಕಾರಗೊಳಿಸುವ ಸಾಮರ್ಥ್ಯ.
ನನ್ನ ನಿಟ್ಟಿನಲ್ಲೂ ಸ್ವಾತಂತ್ರ್ಯ ಎಂದರೆ ಪ್ರೀತಿ, ಗೌರವ, ಸಂತೋಷಗಳನ್ನು ಗರಿಷ್ಠ ಮಟ್ಟದಲ್ಲಿ ಸಾಧಿಸುವುದು, ಸೌಹಾರ್ದತೆಯನ್ನು ಸ್ಥಾಪಿಸುವುದು ಮತ್ತು ಏಕತೆಯಿಂದ ದೇಶವನ್ನು ಪ್ರಗತಿಪಥದಲ್ಲಿ ಮುನ್ನುಗ್ಗಿಸುವುದು.
ಭಾರತಕ್ಕೆ ಸ್ವಾತಂತ್ರ್ಯ ದಕ್ಕಿ ಎಪ್ಪತ್ತು ವರ್ಷಗಳ ನಂತರವೂ ಬೇರೆ ಬೇರೆ ಕ್ಷೇತ್ರದಲ್ಲಿ, ವಿವಿಧ ರೀತಿಯಲ್ಲಿ ದಾಸ್ಯ ಇನ್ನು ಮುಗಿದಿಲ್ಲ. ಈ ನಿಟ್ಟಿನಲ್ಲಿ ನನ್ನ ಅಭಿಲಾಷೆಗಳು ಹಲವಾರು.
ಮುಖ್ಯವಾಗಿ ಮಹಿಳೆಯರು ನಿರ್ಭಯವಾಗಿ, ಸಮಾನ ಅವಕಾಶಗಳೊಂದಿಗೆ ಕೆಲಸ ಮಾಡುವಂತಾಗಲಿ. ಲಿಂಗಭೇದ, ಅಸುರಕ್ಷತೆ, ಅಸಮಾನತೆ – ಇವುಗಳು ಸಂಪೂರ್ಣ ಅಳಿದು ಹೋಗಲಿ. ಮಕ್ಕಳು ಕೇವಲ ಅಂಕಗಳಿಗೆ ಅಳವಡಿಸಿಕೊಂಡು ಬದುಕದೆ, ಸ್ವಯಂ ನಿರ್ದೇಶಿತ ಅಧ್ಯಯನದಿಂದ ತಮ್ಮ ಆಸಕ್ತಿಗಳನ್ನು ಬೆಳೆಸಿಕೊಳ್ಳಲಿ. ಶಿಕ್ಷಣವು ಸ್ವತಂತ್ರ ಚಿಂತನೆಗೆ ದಾರಿ ಮಾಡಿಕೊಡಲಿ.ವಯೋವೃದ್ಧರು ತಮ್ಮ ಕೊನೆಯ ಉಸಿರಿನವರೆಗೂ ತಮ್ಮ ಇಚ್ಛೆಯಂತೆ ಬದುಕುವ ಹಕ್ಕು ಹೊಂದಿರಲಿ. ಸಮಾಜದಲ್ಲಿ ಅವರ ಸ್ಥಾನಮಾನ ಗೌರವದಿಂದ ಉಳಿಯಲಿ.
ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಬಲಿದಾನವು ವ್ಯರ್ಥವಾಗದಂತೆ, ನಾವು ನಮ್ಮ ದೇಶವನ್ನು ಭ್ರಷ್ಟಾಚಾರ, ಅಸಮಾನತೆ, ಭಯ, ಹಿಂಸೆ, ಪ್ರಕೃತಿ ವಿಕೋಪ ಇವುಗಳಿಂದ ಮುಕ್ತಗೊಳಿಸಬೇಕಾಗಿದೆ. ಅಷ್ಟೇ ಅಲ್ಲ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ಗೌರವದಿಂದ, ಭಯವಿಲ್ಲದೆ, ಸ್ವತಂತ್ರವಾಗಿ ಬದುಕಲು ಸಾಧ್ಯವಾಗಬೇಕು. ಉಜ್ವಲ ಭಾರತದ ವಿಕಾಸಕ್ಕೆ ಪಣತೊಟ್ಟು ನಾವೆಲ್ಲ ಒಗ್ಗಟ್ಟಾಗಿ ಸಾಗಬೇಕು.
ಜೈ ಹಿಂದ್
ಸಹಪ್ರಾಧ್ಯಾಪಕಿ , ರೋಗಲಕ್ಷಣ ಶಾಸ್ತ್ರ
ಕೆ ಎಲ್ ಇ ಜೆಜಿಎಂಎಂ ಮೆಡಿಕಲ್ ಕಾಲೇಜು
ಹುಬ್ಬಳ್ಳಿ