ಸೂಕ್ಷ್ಮವಾಗಿ ಗಮನಿಸು ನೀನೊಮ್ಮೆ ಏನಿದೆ ಈ ಪ್ರಕೃತಿಯ ಒಳಗೆ;
ಕಾಣುವುದು ನಿನಗೆ ಸುಕೃತಿಯ ಜೊತೆಗೆ ವಿಕೃತಿ ಅದರ ಪಾಲಿಗೆ.
ಭಾಸ್ಕರನ ಖರಕರ ದಹಿಸುವುದು ಧರಣಿಯ ಬಂದಾಗ ಋತು ಬೇಸಿಗೆ;
ನಿಲ್ಲದಿರುವುದು ಈ ಸಮಯ, ಬರುವುದು ಮಳೆಗಾಲ ಮಾಡಿ ಧರಣಿಯ ತಣ್ಣಗೆ.
ಬರಗಾಲ ಬಂದಾಗ ಬತ್ತಿ ಹೋಗುವುದು ನದಿ, ಹರಿದುಕೊಂಡು ಹೋಗಿ ಸಣ್ಣಗೆ;
ಸಂತಸದಿಂದ ತುಂಬಿ ಪ್ರವಹಿಸುವುದಿಲ್ಲವೇ ಅದು, ಮಳೆ ಮತ್ತೆ ಬರಲು ಭೂಮಿಗೆ.
ಮಾಗಿಯ ಎದುರಿಸಲು ಬೋಳಾಗುವುದು ಗಿಡಮರ ಶರತ್ಕಾಲದ ವೇಳೆಗೆ ;
ಉಲ್ಲಾಸ ತೋರುತ ಚಿಗುರೊಡೆಯಲೇ ಬೇಕವು ವಸಂತ ಆಗಮಿಸಿದಾಗ ಮೆಲ್ಲಗೆ.
ಪರಿಸರ ಬದಲಾವಣೆ ಸಂಕಷ್ಟ ತರುವುದು ಒಮ್ಮೊಮ್ಮೆ ಪಕ್ಷಿಗಳ ಬಾಳಿಗೆ ;
ವಿಘ್ನ ಪರಿಹರಿಸಿಕೊಳ್ಳುವುದಿಲ್ಲವೇ ಅವು ,ವಲಸೆ ಹೋಗಿ ಬೇರೆ ಊರಿಗೆ.
ಕಾಡು ಕಡೆದು ನಾಡು ಮಾಡಿ ಇರದಂತೆ ಮಾಡಿದರು ಪ್ರಾಣಿಗಳಿಗೆ ಮಾಳಿಗೆ ;
ಜೀವಿಸುತ್ತಿಲ್ಲವೇ ಅವುಗಳು ಪೂರ್ಣ ವಿರಾಮ ಇಡದೆ ತಮ್ಮ ಬಾಳಿಗೆ.
ಭೂಮಿ, ನದಿ ,ಗಿಡ, ಮರ ,ಪ್ರಾಣಿ, ಪಕ್ಷಿ ತೊಂದರೆ ಬಂದಾಗ ಯಾವುದು ಯೋಚಿಸಲಿಲ್ಲ ಕೀಳಾಗಿ;
ಸಕಾರಾತ್ಮಕವಾಗಿ ಇರುವವು ವಿನಹ, ಪ್ರಾಣತ್ಯಾಗ ಮಾಡುವ ಪ್ರಶ್ನೆಯೇ ಇಲ್ಲ ಇವರ ಬಾಳಹಾದಿಗೆ.
ನೀನು ಕೂಡ ಪ್ರಕೃತಿ, ನೀನೇಕೆ ಯತ್ನಿಸುವೆ ಆತ್ಮಹತ್ಯೆಗೆ?
ಧನಾತ್ಮಕನಾಗಿ ಜೀವಿಸು, ಇದು ನೀನು ಆ ಸೃಷ್ಟಿಕರ್ತನಿಗೆ ಕೊಡುವ ದೇಣಿಗೆ......
Psychiatrist
USM KLECCH
Yellur, Belgaum